ನವದೆಹಲಿ, ಅಕ್ಟೋಬರ್ 24: ಇಂಡಿಯಾ ಟುಡೇ- ಆಕ್ಸಿಸ್ ಮೈ ಇಂಡಿಯಾದ ಗುಜರಾತ್ ವಿಧಾನಸಭಾ ಚುನಾವಣೆ ಪೂರ್ವ ಸಮೀಕ್ಷೆ ಬಂದಿದ್ದು, ಬಿಜೆಪಿಯು ನಿಚ್ಚಳ ಗೆಲುವು ಸಾಧಿಸುತ್ತದೆ ಎಂದು ಸಮೀಕ್ಷೆ ಹೇಳುತ್ತಿದೆ. ಇಪ್ಪತ್ತೆರಡು ವರ್ಷದ ಆಡಳಿತ ವಿರೋಧಿ ಅಲೆ, ಜಿಎಸ್ ಟಿ ಜಾರಿ, ಅಪನಗದೀಕರಣ -ಇಂಥ ಯಾವ ವಿಚಾರವೂ ಬಿಜೆಪಿಯ ಗೆಲುವನ್ನು ತಡೆಯಲು ಸಾಧ್ಯವಿಲ್ಲ ಎಂದು ಈ ಸಮೀಕ್ಷೆ ತಿಳಿಸುತ್ತಿದೆ.
ಈ ಸಮೀಕ್ಷೆಯಲ್ಲಿ 18,243 ಮಂದಿ ಭಾಗವಹಿಸಿದ್ದರು. ಶೇ ನಲವತ್ತೆಂಟು ಮಂದಿ ಬಿಜೆಪಿಗೆ ಮತ ಹಾಕುವುದಾಗಿ ಹೇಳಿದ್ದರೆ, ಶೇಕಡಾ ಮೂವತ್ತೆಂಟರಷ್ಟು ಜನ ಕಾಂಗ್ರೆಸ್ ಗೆ ಮತ ಹಾಕುವುದಾಗಿ ತಿಳಿಸಿದ್ದಾರೆ. ಈ ಹತ್ತು ಪರ್ಸೆಂಟ್ ನ ವ್ಯತ್ಯಾಸವೇ ಸಾಕು, ಎಂಥ ಆಡಳಿತ ವಿರೋಧಿ ಅಲೆಯಲ್ಲೂ ಈಜಿ ದಡ ಸೇರುತ್ತದೆ ಎನ್ನಲಾಗಿದೆ.
ಗುಜರಾತ್ ನ ಈ ಬಾರಿಯ ಚುನಾವಣೆಯಲ್ಲೂ ಪ್ರಧಾನಿ ನರೇಂದ್ರ ಮೋದಿಯೇ ಬಿಜೆಪಿಗೆ ಮತ ಸೆಳೆಯುವ ಶಕ್ತಿಯಾಗಲಿದ್ದಾರೆ. ಶೇ 66ರಷ್ಟು ಮಂದಿ ಮೋದಿ ಪ್ರಧಾನಿಯಾದ ನಂತರ ಗುಜರಾತ್ ಗೆ ಅನುಕೂಲವಾಗಿದೆ ಎಂದು ಅಭಿಪ್ರಾಯಪಟ್ಟರೆ, ಶೇ 74ರಷ್ಟು ಮಂದಿ ಮೋದಿ ನೇತೃತ್ವದ ಕೇಂದ್ರ ಸರಕಾರ ಉತ್ತಮ ಅಥವಾ ಅತ್ಯುತ್ತಮ ಕೆಲಸ ಮಾಡಿದೆ ಎಂದಿದ್ದಾರೆ